ಮುಚ್ಚಿ

  ಗ್ರಾಮ ಲೆಕ್ಕಾಧಿಕಾರಿ

  ಗ್ರಾಮಲೆಕ್ಕಿಗರು

  ಗ್ರಾಮಲೆಕ್ಕಾಧಿಕಾರಿಗಳನ್ನು ಒಂದು ಹಳ್ಳಿಗೆ ಅಥವಾ ಹಳ್ಳಿಗಳ ಗುಂಪಿಗೆ ನೇಮಕ ಮಾಡಲಾಗುತ್ತದೆ ಮತ್ತು ಅವರು ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಅಡಿಯಲ್ಲಿ ಅಥವಾ ಯಾವುದೇ ಕಾನೂನಿನಡಿಯಲ್ಲಿ ನಿಗಧಿಪಡಿಸಿದ ಎಲ್ಲಾ ಕರ್ತವ್ಯಗಳನ್ನು ಜಾರಿಯಲ್ಲಿರುವ ಇತರೆ ಕಾನೂನುಗಳನ್ವಯ ಕಾರ್ಯನಿರ್ವಹಿಸುತ್ತಾರೆ, ಸರ್ಕಾರ ನಿಗಧಿಪಡಿಸಿರುವ ಎಲ್ಲಾ ವಹಿಗಳು, ಲೆಕ್ಕ ಪತ್ರಗಳು ಮತ್ತು ಇತರೆ ದಾಖಲೆಗಳನ್ನು ನಿರ್ವಹಿಸಬೇಕು, ಕಂದಾಯ ಇಲಾಖೆಯ ತಾಲ್ಲೂಕಿನ ಉನ್ನತ ಅಧಿಕಾರಿಗಳು ಅಥವಾ ಜಿಲ್ಲೆಯ ಉನ್ನತ ಅಧಿಕಾರಿಗಳು ಕೇಳಿದ ಸಂಧರ್ಭದಲ್ಲಿ ಗ್ರಾಮದ ಅಭ್ಯುದಯಕ್ಕಾಗಿ ಸಂಭಂಧಿತ ದಾಖಲೆಗಳನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರದ ಉಪಯೋಗಕ್ಕೆ ನಿರ್ವಹಿಸಬೇಕಾಗುತ್ತದೆ. ಸರ್ಕಾರದ ನೋಟೀಸ್, ವರದಿಗಳು ಮತ್ತು ಇತ್ಯಾದಿಗಳನ್ನು ಸಾರ್ವಜನಿಕರಿಗೆ ಜಾರಿ ಮಾಡುವುದು ಇವರ ಕರ್ತವ್ಯವಾಗಿರುತ್ತದೆ.

  ಗ್ರಾಮ ಲೆಕ್ಕಾಧಿಕಾರಿ ನೇರವಾಗಿ ಕಂದಾಯ ನಿರೀಕ್ಷಕರ ಮೇಲ್ವಿಚಾರಣೆ ಮತ್ತು ನಿಯಂತ್ರಣದಲ್ಲಿರುತ್ತಾರೆ. ಗ್ರಾಮಲೆಕ್ಕಾಧಿಕಾರಿಗಳು ಗ್ರಾಮ ಮಟ್ಟದಲ್ಲಿ ಕಂದಾಯ ಆಡಳಿತದ ಪ್ರಮುಖ ಕಾರ್ಯಕಾರಿ ಅಧಿಕಾರಿಯಾಗಿದ್ದು ಗ್ರಾಮಸ್ಥರಿಗೆ ಲಭ್ಯವಾಗುವಂತೆ ತನ್ನ ವೃತ್ತದ ಕೇಂದ್ರ ಗ್ರಾಮದಲ್ಲಿ ವಾಸಿಸಬೇಕು. ಗ್ರಾಮಲೆಕ್ಕಾಧಿಕಾರಿಯ ಕೇಂದ್ರಸ್ಥಾನವನ್ನು ಜಿಲ್ಲಾಧಿಕಾರಿ ನಿಗಧಿಪಡಿಸಿದ್ದಾರೆ ಮತ್ತು ಕೇಂದ್ರ ಸ್ಥಾನದಲ್ಲಿ ವಾಸಿಸದ ಗ್ರಾಮ ಲೆಕ್ಕಾಧಿಕಾರಿಯು ಶಿಸ್ತು ಕ್ರಮಗಳನ್ನು ಎದುರಿಸಬೇಕಾಗುತ್ತದೆ.

  ಕೆಲವು ರಾಜ್ಯ ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿ ಗ್ರಾಮಲೆಕ್ಕಾಧಿಕಾರಿಯ ಅಧಿಕಾರಗಳು ಮತ್ತು ಕಾರ್ಯಗಳು ಹೀಗಿವೆ: –

  1) ಕರ್ನಾಟಕ ಭೂ ಕಂದಾಯ ಕಾಯ್ದೆ 1964:

  • ಸೆಕ್ಷನ್ 17 (1): – ಗ್ರಾಮಲೆಕ್ಕಾಧಿಕಾರಿಗಳು ರಾಜ್ಯ ಸರ್ಕಾರವು ನಿಗಧಿಪಡಿಸಿದ ವಹಿಗಳು, ಖಾತೆಗಳು ಇತ್ಯಾದಿಗಳನ್ನು ನಿರ್ವಹಿಸುತ್ತಾರೆ.
  • ವಿಭಾಗ 145: – ಗ್ರಾಮಲೆಕ್ಕಾಧಿಕಾರಿಗಳು ಗ್ರಾಮ ಗಡಿ ಗುರುತುಗಳ ನಾಶ ಅಥವಾ ಅನಧಿಕೃತ ಬದಲಾವಣೆಯನ್ನು ತಡೆಯಬೇಕಾಗುತ್ತದೆ.

  2) ಕರ್ನಾಟಕ ಭೂ ಕಂದಾಯ ನಿಯಮಗಳು 1966: –

  • ನಿಯಮ 28: ವ್ಯವಸ್ಥಾಪನಾ ಅಧಿಕಾರಿಯವರು ಗ್ರಾಮಲೆಕ್ಕಾಧಿಕಾರಿಗಳಿಂದ ಪ್ರಧಾನ ಬೆಳೆಗಳನ್ನು ಪ್ರತಿನಿಧಿಸುವ ಹಳ್ಳಿಗಳಿಂದ ಅಗತ್ಯ ಮಾಹಿತಿಯನ್ನು ಸಂಗ್ರಹಿಸಬೇಕು.
  • ನಿಯಮ 40: ಗ್ರಾಮಲೆಕ್ಕಾಧಿಕಾರಿಗಳು ನಮೂನೆ 16 ರಲ್ಲಿ ಪ್ರಾಥಮಿಕ ಭೂ ದಾಖಲೆಗಳನ್ನು ಸಿದ್ಧಪಡಿಸಿ ಮತ್ತು ಕೇಳಿದಾಗ ಅದನ್ನು ಸಲ್ಲಿಸಬೇಕು ಹಾಗೂ ಪೂರ್ಣಗೊಂಡ ವರದಿಯನ್ನು ಕಂದಾಯ ನಿರೀಕ್ಷಕರು ಅಥವಾ ಇತರ ಅಧಿಕಾರಿಗೆ ಕಳುಹಿಸಬೇಕು. ಚಾವಡಿಯಲ್ಲಿ ಪ್ರಾಥಮಿಕ ದಾಖಲೆಯನ್ನು ಪ್ರಚುರಪಡಿಸಿ ಕಂದಾಯ ನಿರೀಕ್ಷಕರು / ಇತರ ಅಧಿಕಾರಿಯವರ ಭೇಟಿಯ ದಿನಾಂಕವನ್ನು ತಿಳಿಸಿ ನೋಟೀಸ್ ಪ್ರಚುರಪಡಿಸಬೇಕು ನಮೂದುಗಳನ್ನು ಪರಿಶೀಲಿಸಲು ಮತ್ತು ವಿಚಾರಣೆಗೆ ಹಾಜರಾಗಲು ಭೂಮಾಲೀಕರನ್ನು ಆಹ್ವಾನಿಸಬೇಕು.
  • ನಿಯಮ 61: ಗ್ರಾಮಲೆಕ್ಕಾಧಿಕಾರಿಗಳು ಹಕ್ಕುಗಳ ದಾಖಲೆಯನ್ನು ಸ್ವೀಕರಿಸಿದ ಕೂಡಲೇ, ಹಕ್ಕುಗಳ ಸಂಬಂಧಿತ ಪ್ರಾಥಮಿಕ ದಾಖಲೆಯನ್ನು ತಹಶೀಲ್ದಾರರಿಗೆ ಕಳುಹಿಸಬೇಕು.
  • ನಿಯಮ 62: ತಹಶೀಲ್ದಾರ್ ಅಥವಾ ಅಧಿಸೂಚನೆಯ ಮೂಲಕ ಸರ್ಕಾರದಿಂದ ಅಧಿಕಾರ ಪಡೆದ ಯಾವುದೇ ಅಧಿಕಾರಿ, ಭೂಮಿಯಲ್ಲಿ ಹಕ್ಕುಗಳನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಮಾಹಿತಿ ಪಡೆದಾಗ, ನಮೂನೆ 19-ಎ ಯಲ್ಲಿ ನಿರ್ದಿಷ್ಟಪಡಿಸಿದಂತೆ ತಂತ್ರಾಂಶ ಬಳಸಿ ಉತ್ತರಾಧಿಕಾರ, ವಾರಸುದಾರಿಕೆ ಅಥವಾ ಆನುವಂಶಿಕತೆ, ಮತ್ತು ಇತರ ಸಂದರ್ಭಗಳಲ್ಲಿ ನಮೂನೆ 20-ಎ ನೋಟೀಸ್‍ಗಳನ್ನು ಹೊರಡಿಸಬೇಕಾಗಿರುತ್ತದೆ.
  • ನಿಯಮ 64 (2): ತಾಲ್ಲೂಕು ಕಛೇರಿಯಿಂದ ನಮೂನೆ 12 ರಲ್ಲಿ ಹಕ್ಕು ಬದಲಾವಣೆ ನಮೂದನ್ನು ಸ್ವೀಕರಿಸಿದ ಕೂಡಲೇ ಪ್ರತಿ ಹಳ್ಳಿಗೆ ನಮೂನೆ 12 ರಲ್ಲಿ ನಿರ್ವಹಿಸಬೇಕಾದ ವಹಿಯಲ್ಲಿ ನಮೂನೆ 12 ರ ಹಕ್ಕು ಬದಲಾವಣೆ ವಿವರಗಳನ್ನು ನಮೂದಿಸಬೇಕು.
  • ನಿಯಮ 65: ತಾಲ್ಲೂಕು ಕಛೇರಿಯಿಂದ ಪಡೆದ ನಮೂನೆ ಸಂಖ್ಯೆ 21 ರ ಪ್ರತಿಗಳನ್ನು ಸೆಕ್ಷನ್ 129 ರ ಉಪವಿಭಾಗ 2 ರ ಅಡಿಯಲ್ಲಿ ಅಗತ್ಯವಿರುವಂತೆ ಅಂತಹ ಎಲ್ಲಾ ವ್ಯಕ್ತಿಗಳಿಗೆ ಗ್ರಾಮಲೆಕ್ಕಾಧಿಕಾರಿಗಳು ಜಾರಿ ಮಾಡಬೇಕು.
  • ನಿಯಮ 70 (1): ತಾಲ್ಲೂಕು ಕಛೇರಿಯಲ್ಲಿ ನಿರ್ವಹಿಸಲಾಗಿರುವ ನಮೂನೆ 16 ರಲ್ಲಿನ ಹಕ್ಕುಗಳ ದಾಖಲೆಯಲ್ಲಿನ ನಮೂದುಗಳನ್ನು ನಿಯಮ 62 ರ ಉಪ ನಿಯಮ 1 ರ ಅಡಿಯಲ್ಲಿ ಒದಗಿಸಲಾದ ತಂತ್ರಾಂಶ ಬಳಸಿ ಹಕ್ಕುಬದಲಾವಣೆ ವಹಿಯಲ್ಲಿ ರವಾನಿಸಲಾದ ಆದೇಶಕ್ಕೆ ಅನುಗುಣವಾಗಿ ಕಾಲೋಚಿತಗೊಳಿಸಬೇಕು. ನವೀಕರಿಸಿದ ದಾಖಲೆಯ ಪ್ರತಿಯನ್ನು ಸಂಬಂಧಪಟ್ಟ ಗ್ರಾಮಲೆಕ್ಕಾಧಿಕಾರಿಗಳ ಗಮನಕ್ಕಾಗಿ 7 ದಿನಗಳಲ್ಲಿ ಕಳುಹಿಸಲಾಗುತ್ತದೆ.
  • ನಿಯಮ 109 (1): ರಾಜಸ್ವದ ಎಲ್ಲಾ ಪಾವತಿಗಳನ್ನು ಗ್ರಾಮಲೆಕ್ಕಾಧಿಕಾರಿಗಳು ಪಡೆದು ನಮೂನೆ ಸಂಖ್ಯೆ 36 ರಲ್ಲಿ ರಶೀದಿಗಳನ್ನು ನೀಡಬೇಕು.
  • ನಿಯಮ 112: ನಮೂನೆ 37 ರಲ್ಲಿ ಸೆಕ್ಷನ್ 162 ರ ಉಪ ಸೆಕ್ಷನ್ 1 ರ ಅಡಿಯಲ್ಲಿ ಗ್ರಾಮಲೆಕ್ಕಾಧಿಕಾರಿಗಳು ಡಿಮ್ಯಾಂಡ್ ನೋಟಿಸ್ ನೀಡಬೇಕು, ಬೇಡಿಕೆಯ ನೋಟೀಸ್ ಸ್ವೀಕರಿಸಿದ ನಂತರ 7 ದಿನಗಳಲ್ಲಿ ಪಾವತಿಸಬೇಕಾದ ಮೊತ್ತವನ್ನು ಅಂತಹ ವ್ಯಕ್ತಿಯು ಪಾವತಿಸಲು ವಿಫಲವಾದರೆ, ಗ್ರಾಮಲೆಕ್ಕಾಧಿಕಾರಿಗಳು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕು ಮತ್ತು ಜಿಲ್ಲಾಧಿಕಾರಿಳು ನಿರ್ದೇಶಿಸಿದಂತಹ, ಪ್ರಕರಣಗಳಲ್ಲಿ ಅಂತಹ ಮಾರಾಟಕ್ಕೆ ವ್ಯಾಪಕ ಪ್ರಚಾರ ನೀಡಿದ ನಂತರ ಕಂದಾಯ ನಿರೀಕ್ಷಕರು ಅದನ್ನು ಮಾರಾಟಕ್ಕೆ ತರಬಹುದು.
  • ನಿಯಮ 121: ಗ್ರಾಮಲೆಕ್ಕಾಧಿಕಾರಿಗಳು ರಾಜಸ್ವ ವಸೂಲಾತಿ ಸಂಗ್ರಹ ಮೊತ್ತ ರೂ 5000/- ಮೀರಿದಲ್ಲಿ ತಾಲ್ಲೂಕು ಖಜಾನೆಗೆ ಪಾವತಿಸಬೇಕು ಇತರೆ ಸಂಧರ್ಭಗಳಲ್ಲಿ ಪ್ರತಿ ತಿಂಗಳ 25 ರೊಳಗೆ ರಾಜಸ್ವ ಸಂಗ್ರಹವನ್ನು ಖಜಾನೆಗೆ ಪಾವತಿಸಬೇಕು, ಖಿರ್ದಿ ಮೂಲಕ ಪಾವತಿಸಬೇಕು.
  • ನಿಯಮ 122: ಗ್ರಾಮಲೆಕ್ಕಾಧಿಕಾರಿಗಳು ಪಂಚಾಯ್ತಿದಾರರ ಸಮ್ಮುಖದಲ್ಲಿ ಸುಸ್ಥಿದಾರನ ಆಸ್ತಿ ಜಪ್ತಿ ಪ್ರಕ್ರಿಯೆಯನ್ನು ನಡೆಸಬೇಕು, ಜಪ್ತಿ ಪ್ರಕ್ರಿಯೆ ಮುಗಿದ ನಂತರ ಜಪ್ತಿ ಮಾಡಿದ ಸರಕುಗಳ ಪಟ್ಟಿಯನ್ನು ಗ್ರಾಮಲೆಕ್ಕಾಧಿಕಾರಿಗಳು ಮತ್ತು ಪಂಚಾಯ್ತಿದಾರರು ದೃಢೀಕರಿಸಬೇಕು, ಜಪ್ತಿ ಮಾಡಿದ ಎಲ್ಲಾ ಸರಕು ಸಾಮಾಗ್ರಿಗಳು ಗ್ರಾಮಲೆಕ್ಕಾಧಿಕಾರಿಗಳ ವಶದಲ್ಲಿ ಇಡಬೇಕು.
  • ನಿಯಮ 131: ಗ್ರಾಮಲೆಕ್ಕಾಧಿಕಾರಿಗಳು ಕೆಲವು ದಾಖಲೆಗಳ ಪ್ರಮಾಣೀಕೃತ ಪ್ರತಿಗಳನ್ನು ನೇರವಾಗಿ 10 ದಿನಗಳಲ್ಲಿ ಅರ್ಜಿದಾರರಿಗೆ ನೀಡಬಹುದಾಗಿದೆ.
  • ನಿಯಮ 141 ಮತ್ತು 141-ಎ: ಹಕ್ಕುದಾಖಲೆ ವಹಿ ಮತ್ತು ಹಕ್ಕು ಬದಲಾವಣೆ ವಹಿಗಳು ಸಾರ್ವಜನಿಕರಿಗೆ ಪರಿಶೀಲನೆಗಾಗಿ ಮುಕ್ತವಾಗಿಡಬೇಕು ಮತ್ತು ಅರ್ಜಿ ಸ್ವೀಕರಿಸಿದ ಅಥವಾ ಬರವಣಿಗೆಯಲ್ಲಿ ಕೋರಿಕೆ ಅಥವಾ ಮೌಖಿಕ ಕೋರಿಕೆ ಮೇರೆಗೆ ಸಾರ್ವಜನಿಕರಿಗೆ ಒದಗಿಸುವುದು.
  • ನಿಯಮ 145 (1): ಗ್ರಾಮಲೆಕ್ಕಾಧಿಕಾರಿಗಳು ಪ್ರತ್ಯೇಕ ಖಾತೆ (ನಮೂನೆ 24) ಮತ್ತು ಖಿರ್ದಿ (ನಮೂನೆ 25)ನ್ನು ನಿರ್ವಹಿಸುಬೇಕು.
  • ನಿಯಮ 147 (1): ಗ್ರಾಮಲೆಕ್ಕಾಧಿಕಾರಿಗಳು ತನ್ನ ಉಸ್ತುವಾರಿಯಲ್ಲಿ ಎಲ್ಲಾ ಗ್ರಾಮಗಳಲ್ಲಿ ಬೆಳೆ ಕಟಾವು ಪ್ರಯೋಗಗಳನ್ನು ನಡೆಸಬೇಕು.

  ಮೇಲಿನವು ವಿವರಣಾತ್ಮಕವಾಗಿದ್ದು, ಸಮಗ್ರವಾಗಿರುವುದಿಲ್ಲ.