ತಹಶೀಲ್ದಾರ್
ತಹಶೀಲ್ದಾರ್
ತಾಲ್ಲೂಕಿನಲ್ಲಿ ತಹಶೀಲ್ದಾರರು ಆಡಳಿತ ಯಂತ್ರದ ಪ್ರಮುಖ ಭಾಗವಾಗಿರುತ್ತಾರೆ. ತಹಶೀಲ್ದಾರರು ಉಪ ವಿಭಾಗಾಧಿಕಾರಿಗಳ ನಿಕಟ ಅಧೀನ ಅಧಿಕಾರಿಯವರಾಗಿರುತ್ತಾರೆ.
ತಹಶೀಲ್ದಾರರು ಭೂ ಕಂದಾಯ ವಸೂಲಾತಿಯ ಜವಾಬ್ದಾರರಾಗಿರುತ್ತಾರೆ. ಹಾಗೂ ರಾಜಸ್ವ ನಿರೀಕ್ಷಕರು ಮತ್ತು ಗ್ರಾಮಲೆಕ್ಕಿಗರು ಅವರ ವೃತ್ತದಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಉಸ್ತುವಾರಿಕೆ ಹಾಗೂ ಗ್ರಾಮದ ದಾಖಲೆಗಳನ್ನು ಕಾಲೋಚಿತಗೊಳಿಸಿ ನಿರ್ವಹಿಸುವ ಕೆಲಸಗಳ ಉಸ್ತುವಾರಿ ಕಾರ್ಯ, ವಿವಾದಾಸ್ಪದ ಪ್ರಕರಣಗಳಲ್ಲಿ ವಿಚಾರಣೆ ಮತ್ತು ಆದೇಶ ಮಾಡುವ ಅಧಿಕಾರ, ಪಹಣಿಗಳ, ಮತ್ತು ಬೆಳೆ ವಹಿಗಳ ಪರಿಶೀಲನೆ, ರಾಜಸ್ವ ವಸೂಲಾತಿ ಮತ್ತು ಪಟ್ಟಾ ಪುಸ್ತಕಗಳ ಪರಿಶೀಲನೆ ಹಾಗೂ ಗ್ರಾಮಗಳ ಸ್ಥಳ ಪರಿಶೀಲನೆ ಜವಾಬ್ದಾರಿ ಹೊಂದಿರುತ್ತಾರೆ. ವಿಶೇಷ ಗಮನ ಹರಿಸಿ ಒತ್ತುವರಿ ತೆರವುಗೊಳಿಸುವಿಕೆ ಭೂ ಸುಧಾರಣಾ ಕಾಯ್ದೆ ಉಲ್ಲಂಘನೆ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳುವಿಕೆ ಮತ್ತು ಭೂ ಅಭಿವೃದ್ಧಿ ಸಾಲಗಳ ತನಿಖೆ, ಅವರ ಪ್ರವಾಸ ಸಮಯದಲ್ಲಿ ಗ್ರಾಮಲೆಕ್ಕಿಗರು ಮತ್ತು ರಾಜಸ್ವ ನಿರೀಕ್ಷಕರು ಅವರವರ ಕರ್ತವ್ಯಗಳ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆಯೇ ಎಂಬ ಪರಿಶೀಲನೆ ಹಾಗೂ ಕ್ರಮಬದ್ಧವಾಗಿ ಕಾರ್ಯ ನಿರ್ವಹಿಸುತ್ತಿರುವ ಕುರಿತು ಪರಿಶೀಲನೆ ಗ್ರಾಮದ ಸ್ಥಳ ಪರಿಶೀಲನೆ ಸಂಧರ್ಭದಲ್ಲಿ ಸಂಬಂಧಿಸಿದ ರಾಜಸ್ವ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರಿಗೆ ಸಲಹೆ ಸೂಚನೆಗಳನ್ನು ನೀಡುವ ಕಾರ್ಯ ನಿರ್ವಹಿಸುತ್ತಾರೆ.
ತಹಶೀಲ್ದಾರ್ ಅವರ ತಾಲ್ಲೂಕಿನಲ್ಲಿ ಸಾರ್ವಜನಿಕ ಪಡಿತರ ವಿತರಣೆ ಜವಾಬ್ದಾರಿ ಹಾಗೂ ಸರ್ಕಾರಿ ಗೊದಾಮುಗಳಲ್ಲಿ ದಾಸ್ತಾನುಗಳ ಆಗಿಂದಾಗ್ಗೆ ತಪಾಸಣೆ ಕಾರ್ಯಗಳ ಜವಾಬ್ದಾರಿ ಹೊಂದಿರುತ್ತಾರೆ. ನ್ಯಾಯ ಬೆಲೆ ಅಂಗಡಿಗಳಲ್ಲಿ ಅಗತ್ಯ ವಸ್ತುಗಳ ತಪಾಸಣೆ ಮತ್ತು ಯಾವುದೇ ಅಕ್ರಮಗಳ ಬಗ್ಗೆ ಸ್ಥಳೀಯ ವಿಚಾರಣೆ ನಡೆಸುವ ಜವಾಬ್ದಾರಿ, ದಂಡ ಪ್ರಕ್ರಿಯಾ ಸಂಹಿತೆಯಡಿಯಲ್ಲಿ ದತ್ತವಾಗಿದ್ದು ಕಾರ್ಯ ನಿರ್ವಾಹಕ ದಂಡಾಧಿಕಾರಿಯೂ ಆಗಿ ಕರ್ತವ್ಯ ನಿರ್ವಹಿಸುತ್ತಾರೆ. ಅವರು ತಾಲ್ಲೂಕಿನ ಸಹಾಯಕ ಮತದಾರರ ನೋಂದಣಾಧಿಕಾರಿಯು ಅಲ್ಲದೇ ಅವರ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯೂ ಆಗಿರುತ್ತಾರೆ. ತಾಲ್ಲೂಕಿನ ಭೂ ನ್ಯಾಯಮಂಡಳಿಯ ಕಾರ್ಯದರ್ಶಿಯಾಗಿ ಕರ್ತವ್ಯ ಕಾರ್ಯನಿರ್ವಹಿಸುತ್ತಾರೆ.
ವಿವಿಧ ರಾಜ್ಯ ಕಾಯ್ದೆಗಳ ಅಡಿಯಲ್ಲಿ ತಹಶೀಲ್ದಾರ್ ಅವರ ಅಧಿಕಾರಿಗಳು ಮತ್ತು ಕರ್ತವ್ಯಗಳು:-
- ಕರ್ನಾಟಕ ಕೃಷಿ ಸಾಲ ಕಾರ್ಯಾಚರಣೆಗಳು ಮತ್ತು ವಿವಿಧ ನಿಬಂಧನೆಗಳ ಕಾಯ್ದೆ 1974 ಮತ್ತು ನಿಯಮಗಳು 1975
- ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ನಿಯಂತ್ರಣ ಕಾಯ್ದೆ 1966
- ಕರ್ನಾಟಕ ಜಾನುವಾರು ಅತಿಕ್ರಮ ಪ್ರವೇಶ ಕಾಯ್ದೆ
- ಕರ್ನಾಟಕ ಕೆಲವು ಇನಾಂ ರದ್ಧಿಯಾತಿ ಕಾಯಿದೆಗಳು
- ಕರ್ನಾಟಕ ನೀರಾವರಿ ಕಾಯ್ದೆ 1965
- ಕರ್ನಾಟಕ ಕಾನೂನು ನೆರವು ಜಿಲ್ಲೆ ಮತ್ತು ತಾಲ್ಲೂಕು ಸಮಿತಿಗಳ ಯೋಜನೆ 1983
- ಕರ್ನಾಟಕ ಸಾರ್ವಜನಿಕ ಆವರಣದಲ್ಲಿ ಅನಧಿಕೃತ ನಿವಾಸಿಗಳನ್ನು ಹೊರಹಾಕುವ ಕಾಯ್ದೆ 1974 ಮತ್ತು ನಿಯಮಗಳು
- ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ಮತ್ತು ನಿಯಮಗಳು
- ಕರ್ನಾಟಕ ಪುರಸಭೆಗಳ ಕಾಯ್ದೆ 1964
- ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಮತ್ತು ನಿಯಮಗಳು 1966
- ಕರ್ನಾಟಕ ಸಾಲ ಪರಿಹಾರ ಕಾಯ್ದೆ 1976
- ಕರ್ನಾಟಕ ವೃದ್ಧಾಪ್ಯ ಪಿಂಚಣಿ ನಿಯಮಗಳು 1955
- ಕರ್ನಾಟಕ ನಿರ್ಗತಿಕ ವಿಧವೆಯರ ಪಿಂಚಣಿ ನಿಯಮಗಳು 1984
ಮೇಲಿನವು ವಿವರಣಾತ್ಮಕವಾಗಿದ್ದು, ಸಮಗ್ರವಾಗಿರುವುದಿಲ್ಲ.