ಮುಚ್ಚಿ

  ಕಂದಾಯ ನಿರೀಕ್ಷಕರು

  ರಾಜಸ್ವ ನಿರೀಕ್ಷಕರು

  ರಾಜಸ್ವ ನಿರೀಕ್ಷಕರು ತಹಶೀಲ್ದಾರರ ಕಾರ್ಯ ನಿರ್ವಾಹಕ ಸಹಾಯಕರಾಗಿರುತ್ತಾರೆ. ತಾಲ್ಲೂಕಿನ ಭೌಗೋಳಿಕ ಪ್ರದೇಶ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಪ್ರತಿ ತಾಲ್ಲೂಕನ್ನು ಅನುಕೂಲಕರ ಸಂಖ್ಯೆಯ ಹೋಬಳಿಗಳನ್ನಾಗಿ ವಿಂಗಡಿಸಿ ಪ್ರತಿ ಹೋಬಳಿಯಲ್ಲಿ ರಾಜಸ್ವ ನಿರೀಕ್ಷಕರು ಮುಖ್ಯಸ್ಥರಾಗಿರುತ್ತಾರೆ.
  ಹೋಬಳಿಯ ವಿಸ್ತೀರ್ಣಕ್ಕನುಸಾರವಾಗಿ ರಾಜಸ್ವ ನಿರೀಕ್ಷಕರು ಅವರ ವ್ಯಾಪ್ತಿಯಲ್ಲಿ 10 ಅಥವಾ 20 ಗ್ರಾಮ ಲೆಕ್ಕಾಧಿಕಾರಿಗಳ ಮುಖ್ಯಸ್ಥರಾಗಿರುತ್ತಾರೆ. ರಾಜಸ್ವ ನಿರೀಕ್ಷಕರು ಮುಖ್ಯವಾಗಿ ಅವರ ಅಧೀನ ಗ್ರಾಮಲೆಕ್ಕಿಗರ ಕಾರ್ಯಗಳ ಉಸ್ತುವಾರಿಯನ್ನು ಹಾಗೂ ತಹಶೀಲ್ದಾರರು ಬಯಸಿದ ಮಾಹಿತಿ ಮತ್ತು ವರದಿ ಇತ್ಯಾದಿಗಳನ್ನು ಒದಗಿಸುವ ಜವಾಬ್ದಾರಿ ಹೊಂದಿರುತ್ತಾರೆ.
  ರಾಜಸ್ವ ನಿರೀಕ್ಷಕರು, ತಹಶೀಲ್ದಾರರ ಮತ್ತು ಗ್ರಾಮಲೆಕ್ಕಿಗರ ಮಧ್ಯೆ ಮುಖ್ಯ ಕೊಂಡಿಯಾಗಿರುತ್ತಾರೆ. ಅವರು ಅವಿರತವಾಗಿ ತಹಶೀಲ್ದಾರರ ಮತ್ತು ಗ್ರಾಮಲೆಕ್ಕಿಗರ ಸಂಪರ್ಕದಲ್ಲಿರುತ್ತಾರೆ ಅವರು ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಹಾಗೂ 1961 ರ ಭೂ ಸುಧಾರಣಾ ಕಾಯ್ದೆಯಲ್ಲಿ ನಿಗಧಿಪಡಿಸಲಾದ ಎಲ್ಲಾ ಕರ್ತವ್ಯಗಳನ್ನು ಹಾಗೂ ಜಾರಿಯಲ್ಲಿರುವ ಇತರೆ ಕಾನೂನುಗಳಲ್ಲಿನ ಕರ್ತವ್ಯ ನಿರ್ವಹಿಸಬೇಕಾಗುತ್ತದೆ.

  ರಾಜಸ್ವ ನಿರೀಕ್ಷಕರವರ ವಿವಿಧ ಕಾರ್ಯಗಳು ಈ ಕೆಳಗಿನಂತಿವೆ :-

  1. (1) ಗ್ರಾಮಲೆಕ್ಕಿಗರ ಕೆಲಸವನ್ನು ಮೇಲ್ವಿಚಾರಣೆ ಮಾಡುವುದು.
   • ಗ್ರಾಮಲೆಕ್ಕಿಗರು ಎಲ್ಲಾ ವಹಿ ಮತ್ತು ನಮೂನೆಗಳಲ್ಲಿ ನಿರ್ಧಿಷ್ಟ ಪಡಿಸಿದ ನಮೂನೆಗಳನ್ನು ನಿರ್ವಹಿಸಿರುವ ಬಗ್ಗೆ ಉಸ್ತುವಾರಿ ವಹಿಸುವುದು.
   • ಎಲ್ಲಾ ದಾಖಲೆಗಳನ್ನು ಗ್ರಾಮಲೆಕ್ಕಿಗರವರು ಕಾಲೋಚಿತಗೊಳಿಸುವಂತೆ ನೋಡಿಕೊಳ್ಳುವುದು.
   • (ಜಿಲ್ಲಾಧಿಕಾರಿಗಳು ನಿಗಧಿಪಡಿಸಿದ ಕೇಂದ್ರ ಸ್ಥಾನದಲ್ಲಿ ಗ್ರಾಮಲೆಕ್ಕಿಗರು ವಾಸಿಸುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುವುದು.
   • ಗ್ರಾಮದ ಕಂದಾಯ ದಾಖಲೆಗಳಲ್ಲಿ ಯಾವುದಾದರೂ ತಪ್ಪು ನಮೂದುಗಳು ಕಂಡುಬಂದಲ್ಲಿ ತಹಶೀಲ್ದಾರ್ ಅವರ ಗಮನಕ್ಕೆ ತರುವುದು.
   • ಕಂದಾಯ ಸಂಗ್ರಹಣೆಯನ್ನು ಗ್ರಾಮಲೆಕ್ಕಾಧಿಕಾರಿಗಳು ಕ್ರಮಬದ್ಧವಾಗಿ ಮಾಡುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುವುದು ಹಾಗೂ ಸಂಗ್ರಹಿತ ಮೊತ್ತಕ್ಕನುಗುಣವಾಗಿ ಕಂದಾಯ ರಶೀದಿ ನೀಡುತ್ತಿದ್ದಾರೆಯೇ ಎಂದು ಪರಿಶೀಲಿಸುವುದು ಮತ್ತು ಸಂಗ್ರಹವಾದ ಮೊಬಲಗನ್ನು ಪ್ರತಿ ಮಾಹೆ 25ನೇ ದಿನಾಂಕದೊಳಗೆ ಸಂಬಂಧಿಸಿದ ಲೆಕ್ಕ ಶೀರ್ಷಿಕೆ ಜಮಾ ಮಾಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಳ್ಳುವುದು.
   • ಗ್ರಾಮಲೆಕ್ಕಿಗರವರು ಹಕ್ಕು ದಾಖಲೆ ವಹಿ ಮತ್ತು ಖಾತಾ ಬದಲಾವಣೆ ವಹಿಯನ್ನು ಸಾರ್ವಜನಿಕ ಪರಿಶೀಲನೆಗಾಗಿ ಮುಕ್ತವಾಗಿ ಇಟ್ಟಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುವುದು.
   • ಕರ್ನಾಟಕ ಭೂ ಕಂದಾಯ ನಿಯಮಗಳು, 1966 ರ ನಿಯಮ 40 ರ ಪ್ರಕಾರ ನಿಗದಿಪಡಿಸಿದಂತೆ ಪ್ರಾಥಮಿಕ ಹಕ್ಕು ದಾಖಲೆಗಳನ್ನು ಗ್ರಾಮಲೆಕ್ಕಾಧಿಕಾರಿಗಳು ಸಿದ್ಧಪಡಿಸುವ ಅಗತ್ಯವಿದ್ದು, ರಾಜಸ್ವ ನಿರೀಕ್ಷಕರವರು ಮೇಲ್ವಿಚಾರಣೆ ನಡೆಸಿ ಪ್ರಾಥಮಿಕ ದಾಖಲೆಗಳನ್ನು ಸರಿಯಾಗಿ ತಯಾರಿಸಲಾಗಿದೆಯೆ ಎಂದು ನೋಡಿಕೊಳ್ಳುವುದು.
   • ಗ್ರಾಮಲೆಕ್ಕಾಧಿಕಾರಿಗಳು ನಮೂನೆ 10 ರಲ್ಲಿ ಅಥವಾ ನಮೂನೆ 19 ಮತ್ತು 20 ರಲ್ಲಿ ಮಾಹಿತಿ ಸ್ವೀಕರಿಸಿದಂತೆ ಕಾಲಾನುಕ್ರಮದಲ್ಲಿ ಹಕ್ಕು ಬದಲಾವಣೆಯನ್ನು ಹಕ್ಕು ಬದಲಾವಣೆ ವಹಿಯಲ್ಲಿ ದಾಖಲಿಸುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುವುದು ಹಾಗೂ ಅಂತಹ ನಮೂದುಗಳ ಪ್ರತಿಗಳನ್ನು ಕನಿಷ್ಠ 30 ದಿನಗಳವರೆಗೆ ಗ್ರಾಮ ಚಾವಡಿಯಲ್ಲಿ ಪ್ರಚುರ ಪಡಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು. (ಕರ್ನಾಟಕ ಭೂ ಕಂದಾಯ ನಿಯಮ 1966 ರ ನಿಯಮ 64).
   • ರಾಜಸ್ವ ನಿರೀಕ್ಷಕರವರು ಹಕ್ಕು ಬದಲಾವಣೆ ವಹಿಯನ್ನು ಪರಿಶೀಲಿಸಿ ಹಕ್ಕು ಬದಲಾವಣೆ ನಮೂದುಗಳನ್ನು ಕಂದಾಯ ದಾಖಲೆಗಳಲ್ಲಿ ಕ್ರಮಬದ್ಧವಾಗಿ ದಾಖಲಿಸಿದ್ದಾರೆಯೇ ಎಂದು ತಪಾಸಣೆ ಮಾಡುವುದು.
   • ಬೆಳೆ ಕಟಾವು ಪ್ರಯೋಗಗಳನ್ನು ತಹಶೀಲ್ದಾರರು ನಡೆಸದೆ ಇರುವ ಹಳ್ಳಿಗಳಲ್ಲಿ ಶೇ 20 ರಷ್ಟು ಗ್ರಾಮಗಳಲ್ಲಿ ನಡೆಸುವುದು ಹಾಗೂ ಉಳಿದ ಗ್ರಾಮಗಳಲ್ಲಿ ಬೆಳೆ ಕಟಾವು ಪ್ರಯೋಗಗಳನ್ನು ಗ್ರಾಮಲೆಕ್ಕಾಧಿಕಾರಿಗಳು ಸರಿಯಾಗಿ ನಡೆಸಿದ್ದಾರೆÉಯೇ ಎಂದು ಉಸ್ತುವಾರಿ ನೋಡಿಕೊಳ್ಳುವುದು (ಕರ್ನಾಟಕ ಭೂ ಕಂದಾಯ ನಿಯಮ 1996 ರ ನಿಯಮ 147).
   • ಭೂ ಲಭ್ಯತಾ ಪಟ್ಟಿಯನ್ನು ಕಾಲೋಚಿತಗೊಳಿಸಿ ಸಾರ್ವಜನಿಕರ ವೀಕ್ಷಣೆಗೆ ಇರಿಸುವಂತೆ ಗ್ರಾಮಲೆಕ್ಕಾಧಿಕಾರಿಗಳಿಗೆ ತಿಳುವಳಿಕೆ ನೀಡುವುದು (ಕರ್ನಾಟಕ ಭೂ ಮಂಜೂರಾತಿ ನಿಯಮ 1969 5). ರಾಜಸ್ವ ನಿರೀಕ್ಷಕರು ವೃದ್ಧಾಪ್ಯ ವೇತನ, ವಿಶೇಷ ಚೇತನರ ವೇತನ ಮತ್ತು ವಿಧವಾ ವೇತನ ವಹಿಯನ್ನು ತಪಾಸಣೆ ಮಾಡಬೇಕು ಹಾಗೂ ವಾರ್ಷಿಕ ತಪಾಸಣೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದು.
  2. ಭೂ ಕಂದಾಯವನ್ನು ಪಾವತಿಸಲು ಬಾಧ್ಯಸ್ಥ ವ್ಯಕ್ತಿಯು ಬೇಡಿಕೆ ಸೂಚನೆಯ 7 ದಿನಗಳಲ್ಲಿ ಬಾಕಿ ಇರುವ ಮೊತ್ತವನ್ನು ಪಾವತಿಸಲು ವಿಫಲವಾದರೆ, ಗ್ರಾಮಲೆಕ್ಕಿಗರವರು ತಹಶೀಲ್ದಾರರಿಗೆ ವರದಿ ಮಾಡಬೇಕು, ಅಂತಹ ಸುಸ್ಥಿದಾರನ ಚರ ಆಸ್ತಿಯನ್ನು ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳಿಗೆ ವರದಿ ಮಾಡುವುದು ಹಾಗೂ ಜಿಲ್ಲಾಧಿಕಾರಿಗಳಿಂದ ಆದೇಶ ಪಡೆದು ಭೂ ಕಂದಾಯ ಬಾಕಿಗಾಗಿ ಕರ್ನಾಟಕ ಭೂ ಕಂದಾಯ ನಿಯಮ 1996 ರ ನಿಯಮ 113 ರ ಅಡಿಯಲ್ಲಿ ಕ್ರಮವಹಿಸುವುದು.
  3. ಭೂ ಮಂಜೂರಾತಿ ಅರ್ಜಿಗಳ ಬಗ್ಗೆ ತಹಶೀಲ್ದಾರ್ ವರದಿ ಕೇಳಿದಾಗ, ಅರ್ಜಿಯಲ್ಲಿನ ವಿವರಗಳು ಸರಿಯಾಗಿದೆಯೇ ಎಂದು ರಾಜಸ್ವ ನಿರೀಕ್ಷಕರು ಪರಿಶೀಲಿಸಬೇಕು ಮತ್ತು ಅರ್ಜಿಯಲ್ಲಿನ ಸತ್ಯಾಸತ್ಯತೆಯನ್ನು ಪರಿಶೀಲಿಸಿ ವರದಿ ಮಾಡಬೇಕು.
  4. ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶವಾಗಿ ಪರಿವರ್ತಿಸುವಾಗ ರಾಜಸ್ವ ನಿರೀಕ್ಷಕರವರು ಸ್ಥಳ ತನಿಖೆ ಮತ್ತು ಮಹಜರ್ ನಡೆಸಿ ವರದಿ ಸಿದ್ಧಪಡಿಸಿ ತಹಶೀಲ್ದಾರರಿಗೆ ಸಲ್ಲಿಸುವುದು.
  5. ಕಂದಾಯ ಅಧಿಕಾರಿಗಳು ಸಾಲ್ವೆನ್ಸಿ ಪ್ರಮಾಣಪತ್ರ, ಜೀವಂತ ಸದಸ್ಯರ ಪ್ರಮಾಣಪತ್ರ, ವಾಸಸ್ಥಳ ಪ್ರಮಾಣಪತ್ರ, ಮುಂತಾದ ವಿವಿಧ ಪ್ರಮಾಣ ಪತ್ರಗಳನ್ನು ನೀಡಬೇಕಾಗುತ್ತದೆ. ಈ ಎಲ್ಲ ಪ್ರಕರಣಗಳಲ್ಲಿ ಕಂದಾಯ ನಿರೀಕ್ಷಕರು ಪರಿಶೀಲಿಸಿ ತಹಶೀಲ್ದಾರರಿಗೆ ವರದಿ ಸಲ್ಲಿಸಬೇಕು. ಇದಲ್ಲದೆ, ತಹಶೀಲ್ದಾರರು ಹೆಚ್ಚಿನ ಸಂಖ್ಯೆಯ ಜಾತಿ ಪ್ರಮಾಣ ಪತ್ರಗಳು ಮತ್ತು ಆದಾಯ ಪ್ರಮಾಣ ಪತ್ರಗಳನ್ನು ನೀಡಬೇಕಾಗುತ್ತದೆ. ಶೈಕ್ಷಣಿಕ ಉದ್ದೇಶಗಳಿಗಾಗಿ ಅಗತ್ಯವಿದ್ದಾಗ ಪ್ರಮಾಣ ಪತ್ರ ನೀಡುವ ಮೊದಲು ರಾಜಸ್ವ ನಿರೀಕ್ಷಕರು ಪರಿಶೀಲಿಸುವ ಅಗತ್ಯವಿಲ್ಲ. ಆದಾಗ್ಯೂ ಶಿಕ್ಷಣ ಸಂಸ್ಥೆಗಳು ಪ್ರಮಾಣ ಪತ್ರಗಳ ಪರಿಶೀಲನೆಗೆ ಕೋರಿದಾಗ ರಾಜಸ್ವ ನಿರೀಕ್ಷಕರು ಪರಿಶೀಲಿಸಿ ತಹಶೀಲ್ದಾರರಿಗೆ ವರದಿ ಸಲ್ಲಿಸಬೇಕಾಗಿರುತ್ತದೆ. ನೇಮಕಾತಿ ಇತ್ಯಾದಿಗಳ ಉದ್ದೇಶಗಳಿಗಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ಅಗತ್ಯವಿದ್ದರೆ ರಾಜಸ್ವ ನಿರೀಕ್ಷಕರು ವಿವರವಾಗಿ ಪರಿಶೀಲಿಸಿ ತಹಶೀಲ್ದಾರರಿಗೆ ವರದಿ ಸಲ್ಲಿಸುವುದು ಮತ್ತು ರಾಜಸ್ವ ನಿರೀಕ್ಷಕರ ವರದಿಯ ಆಧಾರದ ಮೇಲೆ ತಹಶೀಲ್ದಾರರು ಪ್ರಮಾಣ ಪತ್ರಗಳನ್ನು ನೀಡುವುದು. ಅದರಂತೆಯೇ ಪೌರತ್ವ ಪ್ರಮಾಣ ಪತ್ರದ ಸಂದರ್ಭದಲ್ಲಿ, ಪರಿಶೀಲನೆಯ ಜವಾಬ್ದಾರಿ ರಾಜಸ್ವ ನಿರೀಕ್ಷಕರ ಮೇಲೆ ಇರುತ್ತದೆ. ವಿದೇಶಿ ನಾಗರಿಕರ ಪರಿಶೀಲನಾ ಪ್ರಮಾಣ ಪತ್ರದ ಸಂದರ್ಭದಲ್ಲಿ, ವಿದೇಶಿ ನಾಗರಿಕರು ಇರುವ ಸ್ಥಳವನ್ನು ಪರಿಶೀಲಿಸಲು ಮತ್ತು ಅವರ ಇರುವಿಕೆಯನ್ನು ನಿರ್ದಿಷ್ಟಪಡಿಸಿಕೊಳ್ಳಲು ಅಗತ್ಯವಿದೆ (ಇವರು ದೇಶಕ್ಕೆ ಸೀಮಿತ ಅವಧಿಗೆ ಬಂದಿರುವ ಸಂಧರ್ಭದಲ್ಲಿ)
  6. ಭೂ ಸುಧಾರಣೆಗಳ ಕಾಯ್ದೆ 1961 ರ ವಿವಿಧ ಅಧ್ಯಾಯದಲ್ಲಿ ಪಟ್ಟಿ ಮಾಡಲಾಗಿರುವಂತೆ ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ರ ಅಡಿಯಲ್ಲಿ ರಾಜಸ್ವ ನಿರೀಕ್ಷಕರು ಕಾರ್ಯಗಳನ್ನು ನಿರ್ವಹಿಸಬೇಕಾಗಿದೆ.
  7. ಪ್ರವಾಹ ಅಥವಾ ಬೆಂಕಿಯಂತಹ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ, S.ಔ.S (ತೊಂದರೆಯ ಸಂಕೇತ) ನೀಡುವ ಜವಾಬ್ದಾರಿ ಹೊಂದಿರುತ್ತಾರೆ. ಯಾವುದೇ ಅಪಾಯದ ತೀವ್ರತೆ ಕಂಡುಬಂದಲ್ಲಿ ಕೂಡಲೇ ಡಂಗುರ ಹೊಡೆಸಿ ಮತ್ತು ಗ್ರಾಮಸ್ಥರಿಗೆ ಸಾಕಷ್ಟು ಎಚ್ಚರಿಕೆ ನೀಡಬೇಕಾಗಿರುತ್ತದೆ. ಹಾಗೂ ಗ್ರಾಮಸ್ಥರಿಗೆ ಅವರ ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಅಪಾಯದ ಸ್ಥಳದಿಂದ ಖಾಲಿ ಮಾಡುವಂತೆ ನೋಡಿಕೊಳ್ಳಬೇಕಾಗುತ್ತದೆ, ಹಾಗೂ ಇತರೆ ಅಗತ್ಯ ಕ್ರಮವಹಿಸಬೇಕಾಗಿರುತ್ತದೆ.
  8. ಬರಗಾಲದ ಸಮಯದಲ್ಲಿ ಆಹಾರ ಮತ್ತು ಮೇವು ಸರಬರಾಜು, ಕುಡಿಯುವ ನೀರು ಸರಬರಾಜು, ಗೋಶಾಲೆ ನಿರ್ವಹಣೆ ಇತ್ಯಾದಿ ಕೆಲಸಗಳಲ್ಲಿ ತಹಶೀಲ್ದಾರರಿಗೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸಬೇಕು, ಬರ ಪರಿಹಾರ ಸೌಲಭ್ಯಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡಬೇಕು ಹಾಗೂ ಬರದಿಂದ ನೊಂದವರಿಗೆ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು.
  9. ಸಾಂಕ್ರಾಮಿಕ ರೋಗಗಳು ಉಲ್ಬಣಿಸಿದಾಗ, ರಾಜಸ್ವ ನಿರೀಕ್ಷಕರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು ಮತ್ತು ಚುಚ್ಚುಮದ್ದು ಕೇಂದ್ರಗಳನ್ನು ವ್ಯವಸ್ಥೆ ಮಾಡಲು ಸಹಾಯ ಮಾಡಬೇಕು.
  10. ಕೋಮು ಗಲಭೆಗಳ ಸಂದರ್ಭದಲ್ಲಿ, ಶಾಂತಿ ಸಮಿತಿಗಳು ರಚನೆಯಾದಾಗ, ರಾಜಸ್ವ ನಿರೀಕ್ಷಕರನ್ನು ಅಂತಹ ಸಮಿತಿಯ ಪದನಿಮಿತ್ತ ಸದಸ್ಯರನ್ನಾಗಿ ಮಾಡಲಾಗುತ್ತದೆ.
  11. ಅಗತ್ಯ ಸರಕುಗಳ ಕಾಯ್ದೆ 1955 ರ ಅಡಿಯಲ್ಲಿ ಹೊರಡಿಸಲಾದ ವಿವಿಧ ಆದೇಶಗಳನ್ನು ಉಲ್ಲಂಘಿಸಲಾಗದಂತೆ ರಾಜಸ್ವ ನಿರೀಕ್ಷಕರು ನಿಗಾವಹಿಸಬೇಕು ಮತ್ತು ಅಂತಹ ಉಲ್ಲಂಘನೆಯ ಪ್ರಕರಣಗಳನ್ನು ತಹಶೀಲ್ದಾರರಿಗೆ ವರದಿ ಮಾಡಬೇಕು.
  12.  ಮಾದಕ ವಸ್ತುಗಳ ತಯಾರಿಕೆ ಅಥವಾ ಸಂಗ್ರಹಣೆಗೆ ಸಂಬಂಧಿಸಿದ ಯಾವುದೇ ಚಟುವಟಿಕೆಯನ್ನು ರಾಜಸ್ವ ನಿರೀಕ್ಷಕರು ಅಬಕಾರಿ / ಪೊಲೀಸ್/ ಕಂದಾಯ ಅಧಿಕಾರಿಗೆ ವರದಿ ಮಾಡಬೇಕು.
  13. ಚುನಾವಣೆಯ ಸಮಯದಲ್ಲಿ, ರಾಜಸ್ವ ನಿರೀಕ್ಷಕರಿಗೆ ಹೆಚ್ಚುವರಿ ಜವಾಬ್ದಾರಿ ಇದ್ದು. ಮತದಾರರ ನೋಂದಣಿ ಮತ್ತು ಮತದಾರರ ಪಟ್ಟಿಯನ್ನು ತಯಾರಿಸಲು ಸಹಾಯ ಮಾಡಬೇಕು. ಮತದಾನದ ಸಮಯದಲ್ಲಿ, ಮತದಾನ ಕೇಂದ್ರಗಳನ್ನು ಗುರ್ತಿಸಿ ವ್ಯವಸ್ಥೆ ಮಾಡುವ ಜವಾಬ್ದಾರಿ ಅವರ ಮೇಲಿದೆ.
  14. ಮುಜರಾಯಿ ಸಂಸ್ಥೆಗಳ ಆಡಳಿತದಲ್ಲಿ ತಹಶೀಲ್ದಾರರಿಗೆ ಸಹಾಯಕರಾಗಿ ಕೆಲಸ ಮಾಡುತ್ತಾರೆ. ಜಾತ್ರೆ ಮತ್ತು ರಥೋತ್ಸವ ಇತ್ಯಾದಿ ಸಂದರ್ಭಗಳಲ್ಲಿ ರಾಜಸ್ವ ನಿರೀಕ್ಷಕರು ಮುಜರಾಯಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಮುಜರಾಯಿ ಸಂಸ್ಥೆಗಳಿಗೆ ಧರ್ಮದರ್ಶಿಯನ್ನು ನೇಮಕ ಮಾಡಲು ವ್ಯಕ್ತಿಗಳ ಹೆಸರನ್ನು ಶಿಫಾರಸು ಮಾಡುವ ಪ್ರಸ್ತಾಪಗಳನ್ನು ಕಳುಹಿಸುವ ಜವಾಬ್ದಾರಿ ಹೊಂದಿರುತ್ತಾರೆ.
  15. ರಾಜಸ್ವ ನಿರೀಕ್ಷಕರು ಗ್ರಾಮಸಂದರ್ಶನದ ವ್ಯವಸ್ಥೆಯನ್ನು ಮಾಡಲು ಸಹಾಯ ಮಾಡಬೇಕಾಗುತ್ತದೆ ಮತ್ತು ಅವರು ಗ್ರಾಮಲೆಕ್ಕಾಧಿಕಾರಿಗಳೊಂದಿಗೆ ಅದರಲ್ಲಿ ಸಕ್ರಿಯವಾಗಿ ಭಾಗವಹಿಸ ಬೇಕಾಗುತ್ತದೆ.(ಗ್ರಾಮಸಂದರ್ಶನಕ್ಕೆ ಒಂದು ದಿನ ನಿಗಧಿಪಡಿಸಲಾಗಿದೆ. ಗ್ರಾಮೀಣ ಫಲಾನುಭವಿಗಳು, ಕಂದಾಯ, ಅಭಿವೃದ್ಧಿ ಇತ್ಯಾದಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿಗಳು ಪರಸ್ಪರ ಅನುಕೂಲಕರ ಸ್ಥಳದಲ್ಲಿ ಸೇರುತ್ತಾರೆ. ಅಲ್ಲಿ, ಒಂದು ಸಣ್ಣ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗುತ್ತದೆ, ಮಂಜೂರಾದ ಸಾಲ/ಸಹಾಯಧನ ಇತ್ಯಾದಿಗಳಿಗೆ ಚೆಕ್ ವಿತರಣೆ ಭೂ ಮಂಜೂರಾತಿಯ ಪ್ರಕರಣಗಳÀಲ್ಲಿ, ಮಂಜೂರಾತಿ ಪ್ರಮಾಣ ಪತ್ರಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗುತ್ತದೆ. ವಿವಿಧ ವೇತನ ಮಂಜೂರು ಆಗಿದ್ದಲ್ಲಿ ಮಂಜೂರಾತಿ ಆದೇಶಗಳನ್ನು ನೀಡಲಾಗುತ್ತದೆ. ರಸಗೊಬ್ಬರಗಳು ಮತ್ತು ಬೀಜಗಳ ವಿತರಣೆಯನ್ನು ಸಹ ಮಾಡಲಾಗುತ್ತದೆ. ಸರ್ಕಾರದ ಪ್ರಯೋಜನಗಳನ್ನು ಫಲಾನುಭವಿಯ ಮನೆ ಬಾಗಿಲಿಗೆ ಒದಗಿಸುವುದು ವಿವಿಧ ಸಹಾಯ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕುವಂತೆ ನೋಡಿಕೊಳ್ಳುವುದು)
  16. ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ 1969 ರ ಸೆಕ್ಷನ್ 18 ರ ಅಡಿಯಲ್ಲಿ ರಾಜಸ್ವ ನಿರೀಕ್ಷಕರವರನ್ನು ಪರಿವೀಕ್ಷಣಾ ಅಧಿಕಾರಿಯಾಗಿ ನೇಮಕ ಮಾಡುತ್ತಾರೆ, ಅವರು ಗ್ರಾಮಲೆಕ್ಕಾಧಿಕಾರಿಗಳು ಇಟ್ಟುಕೊಂಡಿರುವ ಜನನ ಮತ್ತು ಮರಣಗಳ ದಾಖಲೆಗಳನ್ನು ಪರಿಶೀಲಿಸಬೇಕು ಮತ್ತು ಅವರ ಪರಿಶೀಲನಾ ವರದಿಗಳನ್ನು ನಿಯಮಿತವಾಗಿ ಜಿಲ್ಲಾ ಸಂಖ್ಯಾಸಂಗ್ರಹಣಾ ಅಧಿಕಾರಿಗೆ ಕಳುಹಿಸಬೇಕು.
  17. ಉನ್ನತ ಅಧಿಕಾರಿಗಳು ಸಂದರ್ಭಾನುಸಾರ ವಹಿಸುವ ಇತರೆ ಕಾರ್ಯಗಳು.

  ಮೇಲಿನವು ವಿವರಣಾತ್ಮಕವಾಗಿದ್ದು, ಸಮಗ್ರವಾಗಿರುವುದಿಲ್ಲ.